ನಿವೇದನೆ

ಭಾವನೆಗಳೂ ಎಂದಿಗೂ ಶಾಶ್ವತವಲ್ಲ....ಆದರೂ ಯಾವ ಭಾವಕ್ಕೆ ಸಾವಿಲ್ಲ ಅನ್ನಿಸಿತೋ ಅದನ್ನ ನಿಮ್ಮ ಮುಂದೆ ಇಟ್ಟಿದ್ದೇನೆ....ಈ ಭಾವಕ್ಕೆ ಜನಿಸಿದ ಕೂಸುಗಳೆಲ್ಲವೂ ಸುಂದರ, ಸಧೃಡ ಎನ್ನಲಾರೆ.... ಆದರೆ ಯಾವುದೂ ಸಮಯಕ್ಕೆ ಮೊದಲೆ ಹುಟ್ಟಿದ ಅಥವಾ ಸತ್ತು ಹುಟ್ಟಿದ ಕೂಸುಗಳಲ್ಲ....

Tuesday, October 6, 2009

ಕೊನೆಯಿಲ್ಲದ ಭಾವವಿದು.......ಬಾರದಿರು ಗೆಳತಿ ಬಾರದಿರು

ನನ್ನೆದೆಯ ಜೋಪಡಿಯೊಳಗೆ
ಇರುವೆನು ಒಬ್ಬನೇ ಹಿತವಾಗಿ
ಬಾರದಿರು ಎಲ್ಲವ ಕೆಡಹುವ
ಬಿರು ಮಾರುತವಾಗಿ
ಬಾರದಿರು ಗೆಳತಿ ಬಾರದಿರು....

ಓಡುವೆನೀಗ ಪ್ರೀತಿಯ ಓಟವನು
ಗೊತ್ತಿದೆ ನಾ ಸೋತೇ ಸೋಲುವೆನು
ಮುಟ್ಟಿಯಾಗಿದೆ ನೀ ಗುರಿಯ
ತೊಡಿಸುವ ಆಸೆ ಅಭಿನಂದನೆ ಗರಿಯ
ಕುಂಟನ ಓಟವ ನೋಡದಿರು
ಬಾರದಿರು ಗೆಳತಿ ಬಾರದಿರು

ತೆರೆಯಲ್ಲ ಬಾಗಿಲನು ನಿನ್ನ ಮರೆವವರೆಗೆ
ಚಾಚಿಹೆನು ಕೈಯ್ಯ ಕಿಟಕಿಯಿಂದ ಹೊರಗೆ
ನನ್ನೆಡೆಗೆ ಬಾ ಎಂದಲ್ಲ.....
ನಿನ್ನ ಮುಗ್ಧ ನಗುವ ಕದಿಯಲೂ ಅಲ್ಲ
ಕೈಯ್ಯ ಸನ್ನೆಯನು ಸರಿಯಾಗಿ ತಿಳಿದುಬಿದು
ವಿದಾಯ ಹೇಳುತಿದೆ ನೀನಿನ್ನು ಹೋಗಿಬಿಡು
ಬಾರದಿರು ಗೆಳತಿ ಬಾರದಿರು

ನೀ ಹಾಡಿದ ಪ್ರೀತಿ ದೂರದಿಂದಲೂ ಕೇಳುತಿದೆ
ಸಾಕಷ್ಟು; ಎದೆಗೆ ಭಾವದ ಮೇಳ ಏಳುತಿದೆ
ನಿನ್ನ ದನಿಯಲ್ಲಿ ಪ್ರತಿ ಪದಕೂ ನಾ ಕಂಬನಿಯಾದೆ
ಜಾರಿದಾ ಕಂಬನಿಯ ಆರಿಸೋ ಧಗೆ ನೀನಾದೆ
ಜನುಮ ಕಳೆದರೂ ನಾನಿರುವೆ ಆಲಿಸುತ್ತ-ನೀ ಹಾಡುತ್ತಿರು
ಬಾರದಿರು ಗೆಳತಿ ಬಾರದಿರು


ಬರುವುದಾದರೆ ಗೆಳತಿ ಒಮ್ಮೆ ಬಾ
ನನ್ನ ಪೂರ ಕದ್ದಮೇಲೆ ಬೇಡ ಕಳ್ಳನಗೆ
ಕೊಡಲು ಬಾ ನನ್ನನ್ನು ನನಗೆ
ತರಬೇಡವೆ ಹಳೆಯ ಪುಳಕವನು
ಹೋಗಿಬಿಡು ಹೊರಗಿಂದ ಹಾಕಿ, ಎದೆಗುಡಿಯ ಚಿಲಕವನು

ಹಾಗೆ ಬಂದವಳು ಹಾಗೇ ಹೋಗಿಬಿಡು
ಬಂದು ಗುಡಿಬೆಳಗೋ ಜ್ಯೋತಿಯ ಆರಿಸದಿರು
ಬಂದರೂ ಬಾರದಿರು ಗೆಳತಿ ಬಾರದಿರು

3 comments:

  1. ಆಹಾ.. ಸುಂದರವಾಗಿದೆ ಕವನ... ಇಷ್ಟವಾಯ್ತು..

    ReplyDelete
  2. ನೀವೆಷ್ಟೇ ಬಾರದಿರೆಂದು ಗೋಗರೆದರೂ ನಿಮ್ಮ ಆ ಗೆಳತಿ ಬಂದು ನಿಮ್ಮ ಬಾಳು ಬೆಳಗಲೆಂದು ಆಶಿಸುತ್ತೇನೆ..

    ReplyDelete
  3. ’ಯಾವ ಭಾವಕ್ಕೆ ಸಾವಿಲ್ಲ ಎನ್ನಿಸಿತೋ ಅದನ್ನು ನಿಮ್ಮ ಮು೦ದಿಟ್ಟಿದ್ದೇನೆ’ ನಿಜವೇ? ಪ್ರತಿಯೊ೦ದು ಭಾವಕ್ಕೂ ಸಾವಿದೆ ಎ೦ಬುದು ನನ್ನ ಅಭಿಪ್ರಾಯ..ಇ೦ದು ಸತ್ತ ಭಾವ ನಾಳೆ ಹುಟ್ಟಲೂಬಹುದು ಎ೦ಬುದು ಕೂಡ...ಈ ಕ್ಷಣದ ಮಟ್ಟಿಗೆ ಈ ಭಾವವಿದೆ ಎನ್ನುವುದು ಮಾತ್ರ ಸತ್ಯವೇನೋ ಎನಿಸುತ್ತದೆ..

    ReplyDelete