ನಿವೇದನೆ

ಭಾವನೆಗಳೂ ಎಂದಿಗೂ ಶಾಶ್ವತವಲ್ಲ....ಆದರೂ ಯಾವ ಭಾವಕ್ಕೆ ಸಾವಿಲ್ಲ ಅನ್ನಿಸಿತೋ ಅದನ್ನ ನಿಮ್ಮ ಮುಂದೆ ಇಟ್ಟಿದ್ದೇನೆ....ಈ ಭಾವಕ್ಕೆ ಜನಿಸಿದ ಕೂಸುಗಳೆಲ್ಲವೂ ಸುಂದರ, ಸಧೃಡ ಎನ್ನಲಾರೆ.... ಆದರೆ ಯಾವುದೂ ಸಮಯಕ್ಕೆ ಮೊದಲೆ ಹುಟ್ಟಿದ ಅಥವಾ ಸತ್ತು ಹುಟ್ಟಿದ ಕೂಸುಗಳಲ್ಲ....

Thursday, October 15, 2009

ರೂಪಕ್ಕಿಂತ ಗುಣ ಮುಖ್ಯ ಎಂದವರ್ಯಾರು?


"ರೂಪಕ್ಕಿಂತ ಗುಣ ಮುಖ್ಯ ಕಣ್ರೀ" ಅಪರೂಪಕ್ಕಾದರೂ ಪ್ರತಿಯೊಬ್ಬರ ಬಾಯಲ್ಲಿ ಬರುವ ಡೈಲಾಗಿದು.
ಆದರೆ ನಮಗೇ ಗೊತ್ತಿಲ್ಲದ ವಿಷಯ ಅಂದರೆ 'ರೂಪ'ವೂ ಒಂದು 'ಗುಣ'ವೇ.


ಪಡೆದ ಡಿಗ್ರೀ, ದೊಡ್ಡ ಕೆಲಸ, ಅಂತಸ್ತು, ಇರುವ ಹಣ ಇವೆಲ್ಲ ಕೊಡೊ confidence ನಂತೆ ನಮ್ಮ ಸುಂದರ ರೂಪವೂ ನಮಗೆ ಗೊತ್ತಿಲ್ಲದಂತೆ ಒಂದು ದೊಡ್ಡ ಆತ್ಮವಿಶ್ವಾಸವನ್ನ ತುಂಬುತ್ತದೆ. ನಾನೆಲ್ಲಿ ಹೋದರು ಇನ್ನೊಬ್ಬರನ್ನ ಆಕರ್ಷಿಸಬಲ್ಲೆ, ಅವರನ್ನ ತನ್ನತ್ತ ಸೆಳೆದು ತನ್ನ ಕೆಲಸ ಮಾಡಿಸಿಕೊಳ್ಳಬಲ್ಲೆ ಅನ್ನೋ ವಿಶ್ವಾಸವನ್ನ ತುಂಬುವುದೇ ನಮ್ಮ ಅಂದ.


"ನೋಡೋಕೆ ಒಳ್ಳೆ ಹುಡುಗನ ಥರ ಕಾಣ್ತೀಯ" ಅಂದರೆ? ನೋಡೋಕೆ ಚೆನ್ನಾಗಿದ್ದೀಯಾ, ಮುಖದಲ್ಲಿ ಮುಗ್ಧತೆ ಕಾಣತ್ತೆ ಹಾಗಾಗಿ ನೀನು ಒಳ್ಳೆಯವನು ಅಂತ ತಾನೆ? ಹೌದು, ಸ್ನಿಗ್ಧ ಸೌ೦ದರ್ಯವೇ ಹಾಗೆ; ಆ ಕ್ಷಣದ ಮಟ್ಟಿಗಾದರೂ ಇವನು ಒಳ್ಳೆಯವ, ಓದಿದವ, ತಿಳಿದವ, ಮರ್ಯಾದಸ್ಥ ಅನ್ನೋ ಭಾವವನ್ನ ತುಂಬುತ್ತೆ.


ದುನಿಯಾ ವಿಜಯ್ ಸುಮ್ಮನೆ ಹೇಳಲಿಲ್ಲ " ಅಲಾ ಏನ್ ಜನಾ? ಕಪ್ಪಗಿದ್ದು ಹಳೆ ಬಟ್ಟೆ ಹಾಕೊಂಡ್ಬಿಟ್ರೆ ಎಲ್ಲ ಕಳ್ಳರ ಥರಾನೆ ಕಾಣ್ತೀವಲ್ಲ!!" ಅಂತ.  Bus conductorನ  ಧ್ವನಿಯನ್ನ ಗಮನಿಸಿದ್ದೀರಾ? ವಿಜಯ್ ಹೇಳಿದ ವೇಷದಲ್ಲಿ ಇದ್ದರೆ "ಏನ್ ಬಾಗ್ಲಲ್ ನಿಂತು ಸಾಯ್ತೀಯ? ಒಳಗಡೆ ಹೋಗಕ್ಕೆ ಆಗಲ್ವ?" ಅನ್ನೋನು ಉತ್ತರ ಭಾರತದ ಚೆಲುವನ ಹತ್ತಿರ "ಸರ್, ಒಳಗಡೆ ಜಾಗ ಖಾಲಿ ಇದೆ ಹೋಗಿ" ಅಂತಾನೆ. ಯಾಕೆ??


ಅದೆಲ್ಲ ಇರಲಿ. ಇಡೀ ಪ್ರಪಂಚದಲ್ಲಿ 'ಕಾಗೆ ನನಗೆ ತುಂಬಾ ಇಷ್ಟ' ಅಂತ ಅನ್ನೋ ಯಾವನಾದರೂ ಒಬ್ಬನನ್ನ ತೋರಿಸಿ ನೋಡುವ? "ಕೋಗಿಲೆಯೂ ಕಾಗೆಯಂತೆ ಕಪ್ಪೇ, 'ಕಾಕಃ ಕೃಷ್ಣಃ ಪಿಕಃ ಕೃಷ್ಣಃ  ಕೋ ಭೇಧಃ ಪಿಕ ಕಾಕಯೋ:' ಆದರೂ ಜನ ಕೋಗಿಲೆಯನ್ನು ಇಷ್ಟಪಡುವುದಿಲ್ಲವೇ?" ಎಂದೇನೂ ನೀವು ಕೇಳಬಹುದು; ಆದರೆ ಕೋಗಿಲೆಗೂ ಗೊತ್ತು, ನಮ್ಮ ಬುದ್ಧಿ. ಅದಕ್ಕೇ ಅದು ಮರದ ಮರೆಯಲ್ಲಿಯೇ ಕುಳಿತು ಕುಹೂ ಕುಹೂ ಎನ್ನುವುದು.


ಕ್ರೈಂ ಡೈರಿಯಲ್ಲಿ ರವಿ ಬೆಳಗೆರೆ "ಪ್ರಿಯ ವೀಕ್ಷಕರೆ, ನೋಡಿ...ಇಷ್ಟು ಸುಂದರ ಮುಖದ ಹುಡುಗೀನಾ ಅದ್ಯಾವ್ ಪರಿ ಕೊಚ್ಚಿ ಹಾಕಿದಾನೆ!!" ಅಂತ ಕೂಗೋವಾಗ ನಮ್ಮಮ್ಮಂದಿರು ಮರುಕ ಪಡೋದೂ ಹಾಗೇ, "ಪಾಪ, ಎಷ್ಟ್ ಚೆಂದ್ ಕೂಸಾಯ್ತ್ತು; ಪಾಪಿ ಕೊಂದ್ ಹಾಕ್ದಾ." ಅಂದರೆ ಸಾವಿನಲ್ಲೂ-ಸಾವಿಗೆ ಕಾರಣವಾದ ಹತ್ಯೆಯಲ್ಲೂ ರೂಪಕ್ಕೇ ಪ್ರಾಮುಖ್ಯತೆ.  ಅದೇ ಜಾಗದಲ್ಲಿ ಒಬ್ಬ ಪೆಚ್ಚು ಮೋರೆಯ ಬೆಪ್ಪು ಹುಡುಗ ಇದ್ದಿದ್ದರೆ ರವಿ ಬೆಳಗೆರೆಯ ಬಾಯಾಲ್ಲಾಗಲಿ, 'ಪ್ರಿಯ ವೀಕ್ಷಕ'ರ ಬಾಯಲ್ಲಾಗಲೀ ಅಂಥ ದೀರ್ಘ ಉದ್ಗಾರ ಬರಲು ಸಾಧ್ಯವೇ ಇಲ್ಲ.


"ಕನ್ನಡವನ್ನು ಸ್ಪಷ್ಟವಾಗಿ ಓದಲು ಬರಬೇಕು, ೨೦-೩೦ ವರ್ಷ ವಯಸ್ಸಿನವರಾಗಿರಬೇಕು ಮತ್ತು ನೋಡಲು ಸುಂದರವಾಗಿರಬೇಕು. ಅಂಥವರು ನಮ್ಮಲ್ಲಿ ಸುದ್ದಿ ವಾಚಕರ ಕೆಲಸಕ್ಕಾಗಿ ತಮ್ಮ ಭಾವಚಿತ್ರದೊಂದಿಗೆ ನಿಮ್ಮ ಸಂಪೂರ್ಣ bio-data ವನ್ನು  ಈ ವಿಳಾಸಕ್ಕೆ ಕಳುಹಿಸಿ" ಎಲ್ಲ ಟಿವಿ ಚಾನೆಲ್ ನವರ ಪ್ರಕಟಣೆಯೂ ಸರಿಸುಮಾರು ಇದೇ ಧಾಟಿಯಲ್ಲಿರುತ್ತದೆ. ಈಗ ಹೇಳಿ_ರೂಪ ಮುಖ್ಯವಲ್ಲ ಅನ್ನೋದಾದರೆ ಯಾಕೆ ಹೀಗೆಲ್ಲ ಹೇಳಬೇಕಿತ್ತು?


ಆದರೆ, 'ಎಂಥ ಸುಂದರ ಮಾವಿನ ಹಣ್ಣ!' ಎಂದು ಆಸೆಯಿಂದ ಕೊಯ್ದಾಗ ಒಳಗಡೆ ಹುಳವಿದ್ದರೆ ಏನು ಪ್ರಯೋಜನ, ಅಂಥ ರೂಪವಿದ್ದು? ನಮ್ಮ ಒಳಗಿನ ರೂಪ ಗೊತ್ತಾದಾಗ ಹೊರಗಿನ ರೂಪಕ್ಕೆ ಯಾವ ಬೆಲೆಯೂ ಇರಲಾರದು; ಪೈನಾಪಲ್ ನ ತಿರುಳು ಇಷ್ಟವಾದವರು ಅದರ ಹೊರಗಿನ ಮುಳ್ಳುಗಳಿಗೆ ತಲೆ ಕೆಡಿಸಿಕೊಳ್ಳಲಾರರು. ಇಲ್ಲದೇ ಹೋಗಿದ್ದಿದ್ದರೆ ಕೆದರಿದ ಕೂದಲಿನ ಐನಸ್ಟೀನ್, ಕುಬ್ಜ ಕಾಯದ ನಾರಾಯಣಮೂರ್ತಿಯಂಥವರಿಗಿಂತ ಸುಂದರ ಮುಖದ ಅಬು ಸಲೇಂನೇ ದೊಡ್ಡ ಮನುಷ್ಯ ಅನ್ನಿಸಿಕೊಳ್ಳುತ್ತಿದ್ದ.


ಮದುವೆಮನೆಗಳಿಗೆ ಹೋಗಿಬಂದವರು ಹೇಳುವುದನ್ನು ಕೇಳಿದ್ದೀರಾ? "ಮನ್ಮಥನ ಥರ ಇರೋ ಅವನಿಗೆ ಅದ್ಯಾಕೆ ಆ ಹುಡುಗಿ ಇಷ್ಟ ಆದಳಪ್ಪಾ?"   " ಮಾರಾಯ್ನೇ, ಆ ಕೂಸು love ಮಾಡಿದ್ದಂತೂ ಮಾಡ್ತು. ಆದ್ರ್ ಅವ್ನ್ ನೋಡಿರೆ ಬಾಳೆಕಾಯಿ ತಿಂಬುಲ್  ಬಪ್ಪವ್ರಾಂಗ್ ಇದ್ನಲೋ!" ನಮಗೆ ಇಷ್ಟವಾದವರು, ಪ್ರೀತಿ ಅನ್ನಿಸಿದವರು ಹೇಗಿದ್ದರೂ ಚೆಂದವೇ. ಆದರೂ ಇದೇ ಚೆಂದದ ಹಿಂದೆ ನಾವೆಲ್ಲಾ ಬಿದ್ದಿರುವುದರಿಂದಲೇ ಇಷ್ಟೊಂದು beauty parlorಗಳು. 

ಅರರೆ! ಎಲ್ಲಿಗೆ ಹೊರೆಟ್ರಿ? ನಾನು ಬ್ಯೂಟಿ ಪಾರ್ಲರ್ ನೆನಪು ಮಾಡಿದ್ದೇ ತಪ್ಪಯಿತಾ? ನಿಲ್ಲಿ, comment ಬರೆದು ಹೋಗಿ.

Monday, October 12, 2009

ದಯವಿಟ್ಟು ಕೊನೆಯವರೆಗೂ ಓದಬೇಡಿ.....


ಸುಮಾರು ೧೫-೧೬ ಮೈಲಿದೂರ ಬಂದಿದ್ದೆ. ಹೊಸದಾಗಿ ಕೊಂಡಿದ್ದ ನನ್ನದೇ ಸ್ವಂತ ಕಾರನ್ನು ತುಸು ಗರ್ವದಿಂದಲೇ ಓಡಿಸುತ್ತಿದ್ದೆ.


ವಿಚಿತ್ರವಾಗಿ ಆದರೆ ಸುಂದರವಾಗಿ ಕಾಣಿಸುತ್ತಿದ್ದ ಅವ ದಾರಿ ಮಧ್ಯೆ ನಿಂತು ನನ್ನ ಕಡೆಯೇ ನೋಡುತ್ತಿದ್ದ; ಹತ್ತಿದರೆ ನನ್ನ ಗಾಡಿಯನ್ನೇ ಎಂದು ನಿರ್ಧರಿಸಿದವನಂತೆ ಕೈ ಅಡ್ಡ ಹಿಡಿದಿದ್ದ.


ಅವನ ರೂಪದ ಆಕರ್ಷಣೆಗೆ ನಾನು ಅವನ ಹತ್ತಿರ ಹತ್ತಿರ ಹೋಗುತ್ತಿದ್ದಂತೆ ನನಗೇ ಅರಿವಾಗದಂತೆ ನನ್ನ ಗಾಡಿಯೊಳಗೆ ಹತ್ತಿಕೊಂಡಿದ್ದ. ನಾನು ಅವನನ್ನು ನೋಡುವುದರಲ್ಲಿ ಕಳೆದು ಹೋಗಿದ್ದೆ.


ಯಾಕೋ ಗೊತ್ತಿಲ್ಲ; ಅವನು ಒಳ ಬಂದಮೇಲೆ ನನ್ನ ವೇಗ-ಆವೇಗ ಎರಡೂ ಮಿತಿಮೀರಿತ್ತು. ಇಬ್ಬರೂ ತುಂಬಾ ಹೊತ್ತು ಹರಟೆ ಹೊಡೆದೆವು. ಬಹುಬೇಗ ತುಂಬಾ ಎಂದರೆ ತುಂಬಾ ಇಷ್ಟವಾಗಿ ಹೋದ. ಹತ್ತಿಸಿಕೊಂಡಿದ್ದಕ್ಕೆ ಧನ್ಯತಾ ಭಾವ ಬಂದಿತ್ತು.


ರಸ್ತೆ ಎಷ್ಟು ಕೆಟ್ಟು ಹೋಗಿದ್ದರೂ, ರಸ್ತೆಯೇ ಅಲ್ಲ ಎಂಬತ್ತಿದ್ದರೂ ನಾನು ಖುಷಿಯಿಂದಲೇ ಸಾಗುತ್ತಿದ್ದೆ. ನನ್ನದೇ ಗಾಡಿ-ಹಾಳಾದೀತು ಎಂಬ ಯಾವ ಚಿಂತೆಗೂ ಅವಕಾಶವನ್ನೇ ಕೊಡದಂತೆ ಗಾಡಿ ಓಡಿಸುತ್ತಿದ್ದೆ.


ನಡುನಡುವೆ ಯಾರ್ಯಾರನ್ನೋ ಒಳಕರೆದೆ. ಇನ್ಯಾರನ್ನೋ ಬೀಳ್ಕೊಟ್ಟೆ. ಕೆಲವರನ್ನ ನಾನೇ ಹೊರನೂಕಿದೆ. ಅದೆಷ್ಟೋ ಸಲ ಯಾರಿಗಾಗೋ ನಾನೇ ಕಾದೆ. ಹೀಗೇ ೩೫-೪೦ ಮೈಲಿ ಸಾಗಿ ಬಂದಿದ್ದು ಗೊತ್ತೇ ಆಗಲಿಲ್ಲ.


ಆದರೆ, ಇವನು ಮಾತ್ರ ಯಾಕೋ ಬರಬರುತ್ತ ತಣ್ಣಗಾಗಿಬಿಟ್ಟಿದ್ದ. ನಮ್ಮ ನಡುವೆ ಮಾತು ಕಡಿಮೆಯಾಗಿ ಹೋಗಿತ್ತು. ಸುಮ್ಮನೆ ನನ್ನನ್ನು ಗುರಾಯಿಸತೊಡಗಿದ್ದ. "ಏನಾಯ್ತು?" ಅಂದೆ ಅಷ್ಟೇ.


ಆ ಪ್ರಶ್ನೆಗೇ ಕಾದಿದ್ದವನಂತೆ ಒಂದೇ ಸಮನೆ ಜೋರು ದನಿಯಲ್ಲಿ ಹೇಳತೊಡಗಿದ.
"ನಾನು ಎಲ್ಲರ ಗಾಡಿಯನ್ನು ಹತ್ತುತ್ತೇನೆ. ಇಲ್ಲೀವರೆಗೆ ಬಂದು ಇಳಿಯುತ್ತೇನೆ. 
ಇಷ್ಟು ದೂರ ನಿನ್ನ ಜತೆಯಿದ್ದೆ. ನಿನ್ನಲ್ಲಿ ಉತ್ಸಾಹವನ್ನ, ಉಲ್ಲಾಸವನ್ನ, ಚೈತನ್ಯವನ್ನ, ಧೈರ್ಯವನ್ನ, ತುಂಬಿದೆ. ಆದರೆ.....
ನೀನು ನನ್ನ ಮಾತನ್ನು ಕೇಳಲೇ ಇಲ್ಲ; ಕೇಳಿದಂತೆ ನಟಿಸಿದೆ ಅಷ್ಟೆ.
ಆ ದಾರೀಲಿ ಹೋಗು ಅಂತ ಬೆರಳು ತೋರಿಸಿದೆ; ನೀನು ನೋಡಲೇ ಇಲ್ಲ.
ಅಷ್ಟು ವೇಗ ಬೇಡ, ಇಲ್ಲಿ ಬ್ರೇಕ್ ಹಾಕಬೇಡ ಅಂದೆ; ನೀನು ಆಲಿಸಲೇ ಇಲ್ಲ.
ಅವರನ್ನ ಹತ್ತಿಸಿಕೋ ಅಂದೆ; ನೀ ಗಮನಿಸಲಿಲ್ಲ.
ಅವರು ನಿನ್ನ ಗಾಡಿಯೊಳಗೆ ಬೇಡ ಎಂದೆ; ನೀ ಅವರನ್ನೇ ಒಳಕರೆದೆ. 
ನಿನ್ನಂಥವನ ಜತೆ ಬಂದಿದ್ದಕ್ಕೆ ನನಗೇ ನಾಚಿಕೆಯಾಗುತ್ತಿದೆ; ನಾನಿನ್ನು ಬರುತ್ತೇನೆ."
"ಹೋಗುವ ಮೊದಲು ನಿನ್ನ ಹೆಸರನ್ನಾದರೂ ಹೇಳಿ ಹೋಗು." ನಾನು ತಣ್ಣಗೆ ಬೆವತಿದ್ದೆ.


ಹೇಗೆ ಬಂದನೋ ಅದಕ್ಕಿಂತಲೂ ವಿಚಿತ್ರವಾಗಿ, ವಿಕ್ಷಿಪ್ತವಾಗಿ ನನ್ನೆಡೆಗೆ ತಿರುಗಿಯೂ ನೋಡದೆ ಹೋಗುತ್ತಿದ್ದವನು, "ನಾನು ನಿನ್ನ ಯೌವನ" ಎಂದಿದ್ದು ಅಸ್ಪಷ್ಟವಾಗಿ ಕೇಳಿಸಿತು. ಕಣ್ಣು ಮಂಜಾಗಿತ್ತು ಮುಂದಿನ ಹಾದಿಯೇ ಕಾಣದಷ್ಟು.Tuesday, October 6, 2009

ಕೊನೆಯಿಲ್ಲದ ಭಾವವಿದು.......ಬಾರದಿರು ಗೆಳತಿ ಬಾರದಿರು

ನನ್ನೆದೆಯ ಜೋಪಡಿಯೊಳಗೆ
ಇರುವೆನು ಒಬ್ಬನೇ ಹಿತವಾಗಿ
ಬಾರದಿರು ಎಲ್ಲವ ಕೆಡಹುವ
ಬಿರು ಮಾರುತವಾಗಿ
ಬಾರದಿರು ಗೆಳತಿ ಬಾರದಿರು....

ಓಡುವೆನೀಗ ಪ್ರೀತಿಯ ಓಟವನು
ಗೊತ್ತಿದೆ ನಾ ಸೋತೇ ಸೋಲುವೆನು
ಮುಟ್ಟಿಯಾಗಿದೆ ನೀ ಗುರಿಯ
ತೊಡಿಸುವ ಆಸೆ ಅಭಿನಂದನೆ ಗರಿಯ
ಕುಂಟನ ಓಟವ ನೋಡದಿರು
ಬಾರದಿರು ಗೆಳತಿ ಬಾರದಿರು

ತೆರೆಯಲ್ಲ ಬಾಗಿಲನು ನಿನ್ನ ಮರೆವವರೆಗೆ
ಚಾಚಿಹೆನು ಕೈಯ್ಯ ಕಿಟಕಿಯಿಂದ ಹೊರಗೆ
ನನ್ನೆಡೆಗೆ ಬಾ ಎಂದಲ್ಲ.....
ನಿನ್ನ ಮುಗ್ಧ ನಗುವ ಕದಿಯಲೂ ಅಲ್ಲ
ಕೈಯ್ಯ ಸನ್ನೆಯನು ಸರಿಯಾಗಿ ತಿಳಿದುಬಿದು
ವಿದಾಯ ಹೇಳುತಿದೆ ನೀನಿನ್ನು ಹೋಗಿಬಿಡು
ಬಾರದಿರು ಗೆಳತಿ ಬಾರದಿರು

ನೀ ಹಾಡಿದ ಪ್ರೀತಿ ದೂರದಿಂದಲೂ ಕೇಳುತಿದೆ
ಸಾಕಷ್ಟು; ಎದೆಗೆ ಭಾವದ ಮೇಳ ಏಳುತಿದೆ
ನಿನ್ನ ದನಿಯಲ್ಲಿ ಪ್ರತಿ ಪದಕೂ ನಾ ಕಂಬನಿಯಾದೆ
ಜಾರಿದಾ ಕಂಬನಿಯ ಆರಿಸೋ ಧಗೆ ನೀನಾದೆ
ಜನುಮ ಕಳೆದರೂ ನಾನಿರುವೆ ಆಲಿಸುತ್ತ-ನೀ ಹಾಡುತ್ತಿರು
ಬಾರದಿರು ಗೆಳತಿ ಬಾರದಿರು


ಬರುವುದಾದರೆ ಗೆಳತಿ ಒಮ್ಮೆ ಬಾ
ನನ್ನ ಪೂರ ಕದ್ದಮೇಲೆ ಬೇಡ ಕಳ್ಳನಗೆ
ಕೊಡಲು ಬಾ ನನ್ನನ್ನು ನನಗೆ
ತರಬೇಡವೆ ಹಳೆಯ ಪುಳಕವನು
ಹೋಗಿಬಿಡು ಹೊರಗಿಂದ ಹಾಕಿ, ಎದೆಗುಡಿಯ ಚಿಲಕವನು

ಹಾಗೆ ಬಂದವಳು ಹಾಗೇ ಹೋಗಿಬಿಡು
ಬಂದು ಗುಡಿಬೆಳಗೋ ಜ್ಯೋತಿಯ ಆರಿಸದಿರು
ಬಂದರೂ ಬಾರದಿರು ಗೆಳತಿ ಬಾರದಿರು

Wednesday, September 23, 2009

ಹಾಂಗೆ ಸುಮ್ನೆಯಾ......


ನನ್ನ ಅಜ್ಜನ ಕಾಲದಲ್ಲೇ 'ಮುಂಗಾರು ಮಳೆ' ಸಿನೆಮಾ ಬಂದಿದ್ದಿದ್ದರೆ ನನ್ನಜ್ಜ ಗದ್ದೆ ಹೂಡುವಾಗ, ತೋಟದ ಕಳೆ ಕೀಳುವಾಗ, ಆಲೆಮನೆಯಲ್ಲಿ ಗಾಣಕ್ಕೆ ಕಬ್ಬು ಕೊಡುವಾಗ 'ಅನಿಸುತಿದೆ ಯಾಕೋ ಇಂದು' ಹಾಡನ್ನ ಹವ್ಯಕ ಭಾಷೆಯಲ್ಲಿ ಹೇಗೆ ಗುನುಗಿಕೊಳ್ಳುತ್ತಿದ್ದನೋ ಅಲ್ಲವೇ....! ಅಕಸ್ಮಾತ್ ಹಾಗೇನಾದರು ಆಗಿದ್ದಿದ್ದರೆ ಅವನು ಹಾಡಿಕೊಳ್ಳುತ್ತಿದ್ದ ಹಾಡು ಇಲ್ಲಿದೆ. 

         ಅಜ್ಜನಿಗೆ ಸಂಗೀತ ಜ್ಞಾನವಿರಲಿಲ್ಲ; ಹಾಗಾಗಿ ಇದನ್ನೂ 'ಅನಿಸುತಿದೆ' ಟ್ಯೂನ್ ನಲ್ಲಿ ಹಾಡುವುದು ಸ್ವಲ್ಪ ಕಷ್ಟವೇ ಆಗಬಹುದು.... ನೆನಪಿರಲಿ, ಅವನು ನನಗೆ ಅಜ್ಜ ಇದ್ದಿರಬಹುದು. ಆದರೆ ಅವನೂ ನಮ್ಮಂತೆ ತುಂಬು ಯೌವ್ವನದಲ್ಲೇ ಹಾಡಿದ್ದು ಇದು.....
("ಹಣೆಯಲಿ ಬರೆಯದ ನಿನ್ನ ಹೆಸರ....ಹೃದಯದಿ ನಾನೇ ಕೊರೆದಿರುವೆ" ಸಾಲನ್ನು ಮಾತ್ರ ಬದಲಾಯಿಸುವ ತಾಕತ್ತು ಮತ್ತು ಮನಸ್ಸು ನನಗಿಲ್ಲ. ನನ್ನಿಷ್ಟದ, ನಾನು ಅತಿಯಾಗಿ ಅನುಭವಿಸುವ ಆ ಸಾಲನ್ನು ಮಾತ್ರ ಹಾಗೇ ಇಟ್ಟಿರುವೆ.)
.
.
.
ಅನ್ಸುಲ್  ಶುರ್ವಾಜೆ  ಎಂತಕೋ  ಇಂದು
ನೀನೇಯಾ  ನನ್ನವ್ಳು  ಹೇಳಿ
ಅರ್ಬೈಲ್  ಗಟ್ಟ  ಇಳ್ದು  ನನ್ಸಲ್ವಾಗೆ  ಬಂದವ್ಳು  ಹೇಳಿ
ಆಹಾ!  ಎಂಥಾ  ಶೀಂಯಾ  ಕ್ವಾಟ್ಲೆಯೇ
ಕೊಲ್ಲೇ  ಕೂಸೇ  ಒಂದ್ಸಲ  ನನ್ನ  ಹಾಂಗೆ  ಸುಮ್ನೆಯ....

ಹಲಸಿನ  ಹಪ್ ಳದಲೂ
ಬರಿ  ನಿಂದೇ  ಜಂಬಲೇ
ಹಿಲ್ಲೂರಾ  ಬೆಟ್ ದಲೂ
ಮರಿ  ನಿಂದೇ  ಹಂಬಲೇ
ಆ  ತೆಂಗ್ನ್ಮರ  ಬಗ್ಗಿದ್ದು  ನೋಡೇ
ನಿನ್ನ  ಪಾದವ  ಕಂಡ  ದಿನ
ನಾ  ಅಡ್ಕೆ  ನೀ  ಶೂಲ್ವೆಯಾ
ನನ್  ನೋಡ್ಕಂಡ್  ಹಲ್ಕಿರ್ಯೇ  ಒಂದ್ಸಲ  ಹಾಂಗೆ  ಸುಮ್ನೆಯ....

ಎನ್ನೆದೆಯ  ಅಲೆಮನೆಯಲಿ
ನಿನ್ನಾ  ಮಾತಿನ  ಕಾಕಂಬಿಯೇ
ಎನ್  ಕನಸಿನ  ತೊಟ್ದಲಿ
ನಿನ್  ಮನಸಿನ  ಸಸಿಯಾಜಲೇ
'ಹಣೆಯಲಿ  ಬರೆಯದ  ನಿನ್ನ  ಹೆಸರ
ಹೃದಯದಿ  ನಾನೇ  ಕೊರೆದಿರುವೆ'
ಇದ್ನೆಲ್ಲ  ನೀ  ಜಾನ್ಸಿದ್ಯನೆ?
ಈ  ಮಂಗನ  ತಿರ್ಗ್  ನೋಡೇ  ಒಂದ್ಸಲ  ಹಾಂಗೆ  ಸುಮ್ನೆಯ.....

Thursday, July 9, 2009

ಹೀಗೊಂದು ಪ್ರೇಮ ಪತ್ರ

ಇವರಿಗೆ,

XYZ....


ಇಂದ,

ಪೆಕರ ಮಹಾಶಯ


ಮಾನ್ಯಳೆ ವಿಷಯ:ನನ್ನ ಪ್ರೀತಿಯನ್ನು ಅಂಗೀಕರಿಸಬೇಕೆಂದು ಕೋರಿ ಅರ್ಜಿ..


ಮೇಲ್ಕಂಡ ಹೆಸರಿನವನಾದ ನಾನು, ಈಗ ಸದ್ಯ ಬೆಂಗಳೂರಿನ ಪಾಳುಬಿದ್ದ ನಗರದಲ್ಲಿ ವಾಸಿಸುತ್ತಿದ್ದೇನೆ. ನಿಮ್ಮನ್ನು ನಾನು ಮೊದಲ ಸಲ ನೋಡಿದಾಗಲೇ ನಾ ಕಳೆದು ಹೋಗಿರುವುದು ತಿಳಿದು ಬಂದಿತ್ತು. ಆದರೂ ಮತ್ತೆ ಮತ್ತೆ ನನ್ನ ಹೃದಯವನ್ನು ವಿಚಾರಿಸಿದಾಗ ನಾನು ನಿಮ್ಮನ್ನು ಪ್ರೀತಿಸುತ್ತಿರುವುದು ಧೃಡಪಟ್ಟಿದೆ. ಅಸ್ಟೇ ಅಲ್ಲದೆ ನಾನು ನೀವಿರದೆ ಬದುಕಲು ಸಾಧ್ಯ ಇಲ್ಲ ಎಂಬುದು ಕೂಡ ತಿಳಿದು ಬಂದಿದೆ. ಬಗ್ಗೆ ನನಗೆ ನನ್ನ ಮನಸ್ಸು ಮೊದಲೇ ವರದಿ ನೀಡಿತ್ತಾದರೂ ನನ್ನ ಕಪಾಳಕ್ಕೆ ನಿಮ್ಮ ಚಪ್ಪಲಿಯ ಏಟು ಬಿದ್ದೀತೆಂಬ ಹೆದರಿಕೆಯಿಂದ ಸುಮ್ಮನಿರಬೇಕಾಗಿ ಬಂದಿತ್ತು. ಆದರೆ ಈಗ ಪರಿಸ್ಥಿತಿ ಕೈ ಮೀರುವ ಹಂತ ತಲುಪಿರುವ ಕಾರಣ ನಾನು ನಿಮ್ಮಲ್ಲಿ ಮೇಲೆ ತಿಳಿಸಿದ ವಿಷಯದಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯಾಳುಗಳಾದ ತಾವು ನನ್ನ ಮನವಿಯನ್ನು ತಿರಸ್ಕರಿಸದೆ ನನ್ನನ್ನೇ ಪ್ರೀತಿಸಬೇಕಾಗಿ ಕೋರುತ್ತಿದ್ದೇನೆ.


ಧನ್ಯವಾದಗಳೊಂದಿಗೆ


ನಿಮ್ಮ ಪ್ರೀತಿ ಸಿಗುವುದೆಂದು ನಂಬಿರುವ ,

ನಿಮ್ಮ ವಿಶ್ವಾಸಿ

ಪೆಕರ ಮಹಾಶಯ

Tuesday, May 26, 2009

ಸ್ವರ್ಗಾ ಮಗಾ ಸ್ವರ್ಗಾ, ಆದರೆ......

"ಆಹಾ, ಮನೆಯ ಮುಂದೆ ಹಸಿರು ಗುಡ್ಡ, ಹಿಂದೆ ಅಡಿಕೆ ತೋಟ, ಅಲ್ಲೇ ಹರಿಯೋ ಹೊಳೆ, ವರ್ಷದ ಆರು ತಿಂಗಳು ಜಿನುಗೋ ಮಳೆ, pure environment, hill station ಥರ ಇರೋ ಮನೆ, ಸುತ್ತಲೂ ವನರಾಜಿ.....ಹೆಬ್ಬಾರ ಸ್ವರ್ಗ ಕಣೋ ಸ್ವರ್ಗ....."

ನನ್ನ ಗೆಳೆಯರನ್ನ ಉತ್ತರ ಕನ್ನಡದ ಪ್ರಕೃತಿ ಸೌಂದರ್ಯವನ್ನ ಉಣಿಸಲು ಕಳೆದ ಮಳೆಗಾಲದಲ್ಲೇ ನಮ್ಮೂರಿಗೆ ಕರೆದುಕೊಂಡು ಹೋಗಿದ್ದಾಗ ಬಂದ ಮಾತುಗಳಿವು. ಆದರೆ ಇಷ್ಟೆಲ್ಲಾ ಹೇಳಿದ ಮೇಲೆ ಕೊನೆಯಲ್ಲಿ ಅವರ ಬಾಯಲ್ಲಿ ಬಂದಿದ್ದು 'ಆದರೆ.....' ಅನ್ನೋ ಪದ.

"
ಆದರೆ.....
ರಾತ್ರಿಯಲ್ಲೋ, ಮನೆಯಲ್ಲಿ ಯಾರೂ ಇರದಿರುವಾಗಲೋ ಏನಾದರೂ ಆದರೆ ಏನು ಮಾಡಬೇಕು? ಹತ್ತಿರದಲ್ಲಿ ಒಂದು ಆಸ್ಪತ್ರೆಯಿಲ್ಲ, ಸತ್ತೆ ಎಂದು ಕೂಗಿದರೆ ಕೇಳಿಸವಷ್ಟು ಹತ್ತಿರದಲ್ಲೂ ಮನೆಗಳಿಲ್ಲ; ಆಟೋ ಎಂದೋ ಕೂಗಿದ ಕೂಡಲೇ ಬರುವಂಥ ವಾಹನಗಳಿಲ್ಲ; ಬೇಸರ ಬಂದಾಗ ಸಿನೆಮಾ ನೋಡಬೇಕು ಅನ್ನಿಸಿದರೆ 30 ಕಿಲೋಮೀಟರ್ ದೂರಕ್ಕೆ ಹೋಗಬೇಕು....ಹ್ಯಾಗೋ ಬದ್ಕ್ತೀರ ಇಲ್ಲಿ? ಪಿಕ್ನಿಕ್ ಗೆ ಒಳ್ಳೆ place ಅಷ್ಟೇ, ಬದುಕೊದಕ್ಕಲ್ಲ ಕಣೋ....

ಅವರಿಗೆ ಇಂದು ನಾವು ಬದುಕುತ್ತ ಇರೋ ರೀತಿನೇ ವಿಚಿತ್ರ, ಭಯಂಕರ ಅನ್ನಿಸಿದರೆ ನಮ್ಮ ಹಿಂದಿನವರು ಇದ್ದರಲ್ಲ; ಎಲ್ಲಿಂದಲೋ ಬಂದು ಕಾಡಿನ ಮಧ್ಯೆ ಮನೆ ಮಾಡಿದರಲ್ಲ ಆಗಿನ ಸ್ಥಿತಿ ನೋಡಿದರೆ ಇನ್ನೇನೆನಿಸಬಹುದು? ಹೌದು, ಹವ್ಯಕರ ಮೂಲ ಉತ್ತರ ಭಾರತ ಅನ್ನೋ ಅಭಿಪ್ರಾಯ ತುಂಬಾ ಜನರಲ್ಲಿ ಇದೆ. ಬಹುಶಃ ಯಾವುದೋ ಮುಸ್ಲಿಂ ರಾಜನ ಆಳ್ವಿಕೆಯ ದಬ್ಬಾಳಿಕೆಯನ್ನ ತಡೆಯಲಾಗದೆ ಇಲ್ಲಿಗೆ ಓಡಿ ಬಂದು ಬದುಕು ಹೂಡಿರಬೇಕು; ಯಾಕೆಂದರೆ ರಾಜರುಗಳ ಅಭಿಪ್ರಾಯ ಜುಟ್ಟುದಾರರನ್ನ ಮತಾಂತರ ಮಾಡಿದರೆ ಇಡೀ ಹಿಂದೂ ಧರ್ಮವನ್ನೇ ಮತಾಂತರಿಸಬಹುದು ಎಂಬುದಾಗಿತ್ತು. ಆದರೆ ಹಾಗೆ ಓಡಿ ಬಂದವರು ನೆಲೆಸಿದ್ದದರೂ ಎಲ್ಲಿ? ರಾಜರಿರಲಿ ಸೂರ್ಯನ ಕಿರಣಗಳಿಗೆ ಪತ್ತೆ ಹಚ್ಚಲಾಗದಂಥ ಕಾಡುಗಳು....ಆಹಾ, ಮತ್ತಿಘಟ್ಟ, ಕಳಚೆ ಅಂಥ ಜಾಗೆಗಳನ್ನ ಇಂದು ನೋಡಿದರೆ ಏನು ಪ್ರಕೃತಿ ಸೌಂದರ್ಯವಪ್ಪಾ ಎಂದು ಹುಬ್ಬೇರಿಸಬಹುದಷ್ಟೇ. ಆದರೆ ಅಂದು ಅದು ಹೇಗೆ ಅಂಥ ಕಗ್ಗಾಡಿನಲ್ಲಿ ಬದುಕಿದರೋ! ರೋಗಗಳು ಬಂದಾಗ, ಗರ್ಭಿಣಿ-ಬಾಣಂತಿ-ಚಿಕ್ಕ ಚಿಕ್ಕ ಮಕ್ಕಳನ್ನ ಅದು ಹ್ಯಾಗೆ ನೋಡಿಕೊಂಡರೋ!! ಅಬ್ಬಾ, ಯೊಚಿಸಿದರೇ ಮೈ ಜುಮ್ಮೆನ್ನುತ್ತದೆ.

ಅಂದಿನ ಮಾತಿರಲಿ ಇಂದಿಗೂ ಜೋರು ಮಳೆ ಸುರಿದಾಗ ನಮ್ಮನೆಹತ್ತಿರದ ಹೊಳೆ ತುಂಬಿ ಹರಿಯುತ್ತದೆ....ಆಗ ನಮಗೆ ಯಾರ ಸಂಪರ್ಕವೂ ಸಾಧ್ಯವಿಲ್ಲ. phone ಸತ್ತು ಬಿದ್ದಿರತ್ತೆ. ನಾವು ಹೋಗಲು ಸಾಧ್ಯವಾಗುವುದು ನಮ್ಮ ಪಕ್ಕದಮನೆ ಹಬ್ಬಣಮನೆಗೆ ಮಾತ್ರ. ಪಕ್ಕದ ಮನೆ ಅಂದರೆ ಕೇವಲ ಮುಕ್ಕಾಲು ಕಿಲೋಮೀಟರ್ ದೂರ. ಅವರ ಮನೆಯದು ಇದೇ ಗತಿ...ನಮ್ಮೆರಡು ಮನೆಗಳದೇ ಒಂದು ಚಿಕ್ಕ ದ್ವೀಪ. ಹೀಗಿದೆ ಮತ್ತು ಹೀಗಿರಲೇಬೇಕು ಮಲೆನಾಡಿನ ಬದುಕು.....


ಸಾಧ್ಯವಾದರೆ ಜೋರು ಮಳೆಗಾಲದಲ್ಲಿ
ಒಮ್ಮೆ ಮಲೆನಾಡಿಗೆ ಬಂದು ನೋಡಿ....
ಹಲಸಿನ ಹಪ್ಪಳದೊಂದಿಂಗೆ ನಿಮ್ಮನ್ನ
ಬರಮಾದಿಕೊಳ್ಳುತ್ತೇವೆ...................


Saturday, May 9, 2009

ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ ಅವನು ನನ್ನೇ ನೋಡಬೇಕು

ನೆಚ್ಚಿನ ಸಾಹಿತಿ 'ಜಯಂತ್ ಕಾಯ್ಕಿಣಿ' ಮೊಗ್ಗಿನ ಮನಸಿಗಾಗಿ ಬರೆದ ಹಾಡಿನ ಈ ಸಾಲು ಮಾತ್ರ ಯಾಕೋ ತುಂಬ ಕಾಡುತ್ತಿತ್ತು. ಯಾವುದಾದರು ಒಬ್ಬ ಹುಡುಗ ನನ್ನೇ ನೋಡಬೇಕು, ಆ ಮಟ್ಟಿಗಾದರೂ ಯಾವುದೋ ಜೀವಿಯ ಜಗತ್ತಿನಲ್ಲಿ ತಾನು ಕೇಂದ್ರಬಿಂದುವಾಗಬೇಕು ಎಂಬ ಮೊಗ್ಗಿನ ಮನಸಿನ ಹೆಬ್ಬಯಕೆ ಎದ್ದು ಕಾಣುತ್ತೆ. ಹುಡುಗಿಯರಿಗೆ ಹೀಗೆ ಅನ್ನಿಸುವುದೋ ಇಲ್ಲವೋ ಅದು ಬೇರೆ ವಿಷಯ. ಆದರೆ ಒಂದಂತೂ ನಿಜ; ಜಗತ್ತಿನ ಪ್ರತಿಯೊಂದು ಜೀವಿಯೂ ತನ್ನೆಡೆಗೆ ಉಳಿದವರ ಗಮನ ಇರಲಿ ಅಂತಲೋ, ಸುತ್ತಲಿನ ಪರಿಸರದಲ್ಲಿ ತಾನೊಬ್ಬ important ವ್ಯಕ್ತಿ ಆಗಬೇಕು ಅಂತಲೋ, ನನ್ನಎಲ್ಲರೂ care ಮಾಡಲಿ ಅಂತಲೋ ಆಸೆ ಪಟ್ಟೇ ಪಡುತ್ತಾರೆ.


ಕೇವಲ
ಒಬ್ಬ ಮನುಷ್ಯನ ಕಥೆಯಲ್ಲ ಇದು. ಉದಾಹರಣೆಗೆ, ಗಂಡು ಗೀಜಗ ಹೆಣ್ಣನ್ನು ಆಕರ್ಷಿಸಲು ಸುಂದರ ಗೂಡನ್ನ ಕಟ್ಟುತ್ತದೆ. ಗೂಡುಹೆಣ್ಣು ಗೀಜಗವನ್ನಾ impress ಮಾಡಿದರೆ ಮಾತ್ರ ಅದು ಅವನ girlfriend ಆಗಲು ಒಪ್ಪಿಕೊಳ್ಳತ್ತೆ; ಇಲ್ಲವಾದರೆ ಇನ್ನೊಂದು ಸುಂದರ ಗೂಡನ್ನ ಕಟ್ಟಿದ ಸುಂದರನ ಹತ್ತಿರ ಹಾರಿ ಹೋಗತ್ತೆ. ಗೀಜಗ ಕೂಡ ಹೀಗೆ ಹಾಡಬಹುದೇನೋ "
ಎಲ್ಲಾರೂ ಕಾಡಿನಲ್ಲಿ ಅವಳನ್ನೇ ನೋಡುವಾಗ ಅವಳು ನನ್ನ ಗೂಡನ್ನೇ ನೋಡಬೇಕು!"


ಡಿ
. ವಿ. ಜಿ. ಯವರು ಸುಮ್ಮನೇ ಹೇಳಲಿಲ್ಲ "
ಮನ್ನಣೆಯ ದಾಹವೆಲ್ಲಕಂ ತೀಕ್ಷ್ಣ" ಅಂತ. ಹೌದು, ಅವರೇ ಹೇಳಿದಂತೆ ಅನ್ನದಾತುರ, ಚಿನ್ನದಾತುರ, ಹೆಣ್ಣು ಗಂಡೊಲವಿಗಿಂತ ತಾನೊಬ್ಬ ಗುರುತಿಸಲ್ಪಡುವ ವ್ಯಕ್ತಿ ಆಗಬೇಕು ಎಂಬ ಬಯಕೆ ಅತಿ ದೊಡ್ಡದು. ಅದಕ್ಕೇ ಹೇಳಿರಬಹುದು " एनकेन कारणेन प्रसिद्ध पुरुषों भव" ಅಂತ.


ಒಮ್ಮೆ
ಹಲ್ಲು ಬಂದಿರದ ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಉದುರಿರುವ ಅಜ್ಜಂದಿರ ವರೆಗೆ ಗಮನಿಸಿ ನೋಡಿ, ತಮಗೆ ಒಂದು ಕಡೆ
importance ಇಲ್ಲ ಅಂತಾದರೆ ಖಂಡಿತ ಅವರು ಸಹಿಸಿಕೊಳ್ಳಲಾರರು. ಆದರೆ ಬೇಸರದ ವಿಷಯ ಅಂದ್ರೆ, ಇದೊಂದೇ ಕಾರಣಕ್ಕೆ ನಾವದೆಷ್ಟೋ ಮುಖವಾಡಗಳನ್ನ ಹಾಕಿಕೊಂಡು ಬಿಡುತ್ತೇವೆ. ಮುಖವಾಡದ ಒಳಗೇ ಅಡಗಿ ಕುಳಿತು ಅದರ ಉರಿಯಲ್ಲಿ ಒಂದು ದಿನ ನಾವೇ ಬೆಂದು ಹೋಗುತ್ತೇವೆ. ಛೆ!!


ಕೊನೆಯಲ್ಲಿ
ಒಂದು ಮಾತು.........
ಜಾತ್ರೆಯಲ್ಲಿ ತೇರನ್ನ ನೋಡೋದು ಬಿಟ್ಟು ನಿಮ್ಮನ್ನ ನೋಡುತ್ತಿರುವ ಕಣ್ಣುಗಳನ್ನ ಹುಡುಕಲು ಹೋಗಿ ನೀವು ತೇರು ನೋಡೋದನ್ನ mis ಮಾಡಿಕೊಳ್ಬೇಡಿ.


for your kind information,

netನಲ್ಲಿ ಯಾರ್ಯಾರೋ ಏನೇನೋ ನೋಡುವಾಗ
ನೀವು ನನ್ನ blogನ್ನೇ ನೋಡಬೇಕು.............


.

Friday, May 8, 2009

ನಾವು ಹುಡುಗರು ಹೀಗೇ ಕಣ್ರೀ

"ಅವ್ಳು ನನ್ನ ಲವ್ ಮಾಡ್ತಾ ಇದಾಳೆ ಅನ್ನಿಸ್ತಿದ್ಯೋ"
ನನ್ನ ಗೆಳೆಯ ಬಂದು ಹೀಗೆ ಹೇಳಿದಾಗ ಕೇಳಿದೆ "ಅದು ಹ್ಯಾಗೆ ಹೇಳ್ತೀಯ?" ಅಂತ.
"ಹೌದೋ ಅವಳು ನನ್ನ ಜತೆ ಆಡೋ ರೀತಿ ನೋಡಿದ್ರೆ ಹಾಗೇ ಅನ್ನಿಸ್ತಾ ಇದ್ಯೋ"
"ಯಾಕೆ ಹಾಗೆಲ್ಲ ಅಂದ್ಕೊತೀಯ ಅದು ಬರೇ ಫ್ರೆಂಡ್ಶಿಪ್ ಇದ್ದಿರಬಹುದೋ"
"ಇಲ್ಲ ಕಣೋ ಅವಳು ನನ್ನ ಹತ್ತಿರ ಮಾತ್ರ ಥರ ನಡೆದು ಕೊಳ್ತಾಳೆ. ಬೇರೆ ಮಾತೆ ಇಲ್ವೋ ಅವ್ಳು ನನ್ನೇ ಲವ್ ಮಾಡ್ತಾಇರೋದು"

ಅಂಥದ್ದೊಂದು ಭ್ರಮೆ ಅವನಲ್ಲಿ ಹುಟ್ಟಿ ಬಿಟ್ಟಿತ್ತು. ಆದರೆ ಅವಳೇ ತನ್ನ ಪ್ರಿಯತಮನ ಇವನಿಗೆ ಪರಿಚಯಿಸುವುದರೊಂದಿಗೆ ಅದು ಸತ್ತಿತು ಕೂಡ. ಅದಕ್ಕೆ ನಾನು ಹೇಳಿದ್ದು ಮತ್ತು ನನಗೆ ಅನ್ನಿಸಿದ್ದು 'ನಾವು ಹುಡುಗರೇ ಹೀಗೆ' ಅಂತ.
ಯಾರೋ ಒಬ್ಬಳು ಒಂದೊಳ್ಳೆ smile ಕೊಟ್ಟರೆ ಸಾಕು.......ಕೆಂಪಿರುವೆ ಗೂಡು ಮೈಮೇಲೆ ಬಿದ್ದಂತೆ ಆಡುತ್ತೇವೆ. ಹುಡುಗಿಯೊಬ್ಬಳು lovely ಅನ್ನೋವಂಥ message ಅನ್ನಾ ಅವಳ friends groupಗೇ forward ಮಾಡಿರ್ತಾಳೆ. ಆದರೆ ಇವಮಾತ್ರ "ನಂಗೇ ಯಾಕೆ ಥರ message ಮಾಡಿದಾಳೆ?" ಅಂತ ಯೋಚನೆಗೆ ಶುರು ಇಡ್ತಾನೆ. ಭವಿಷ್ಯ ಹೇಳ್ತೀನಿ ಕೈ ಕೊಡು ಅನ್ನುತ್ತಾ "ನಿನ್ನ ಹೆಂಡತಿ ತುಂಬ ಪುಣ್ಯವಂತೆ" ಅಂದಿರ್ತಾಳೆ ಕೇವಲ ಸ್ನೇಹದ ಸಲುಗೆಯಿಂದ. ಅದನ್ನಿವ, "ನಾನೇ ನಿನ್ನ ಹೆಂಡತಿ" ಅಂದಳು ಅಂದ್ಕೊತಾನೆ.

ಒಮ್ಮೆ ಯೋಚನೆ ಕೂಡ ಮಾಡುವುದಿಲ್ಲ.........
ನಾನ್
ಅವಳನ್ನ ಪ್ರೀತಿಸಲು ಅರ್ಹನಾ? ನನ್ನಂಥವನ ಅವಳು ಇಷ್ಟ ಪಡ್ತಾಳ? (ಪ್ರೀತಿಸೋ ಹೃದಯಗಳಿಗೆ ಇಂಥವುಗಳ ಹಂಗು ಇರುವುದಿಲ್ಲ ಅನ್ನೋದು ನಿಜ..ಆದರೂ)
ತಾನು
ಬೆಳ್ಳಿ i love
you ಅಂದ್ರೆ ಅವಳು ಕರಿಯ i love you ಅಂತಾಳ? (ಸುಂದರಿಯನ್ನ ಪ್ರೀತಿಸೋನು ಸುಂದರನೇ ಆಗಬೇಕು ಅಂತೇನೂ ಇಲ್ಲ..ಆದರೂ)
ಇವಳನ್ನ love
ಮಾಡಿದ್ರೆ ಮುಂದೆ ಎಲ್ಲ ಸಲೀಸಾಗಿ ನಡೆದೀತ? (ಇವಕ್ಕೆಲ್ಲ ಹೆದರಿ ಕುಳಿತರೆ ಯಾರು love ಮಾಡಲಾರಾರರು..ಆದರೂ)


ಇಂಥವೆಲ್ಲ ಭ್ರಮೆಗಳು ನಮ್ಮಂಥ ಹುಡುಗರಿಗೆ ಯಾಕೆ ಕಾಡ್ತಾವೆ ಅಂತ ಗೊತ್ತಿಲ್ಲ. ಆದರೆ ಇವಕ್ಕೆ ಒಂದು ಶುದ್ಧ ಸ್ನೇಹ ಸಂಬಧವನ್ನ ಹಾಳು ಮಾಡುವ ತಾಕತ್ತಿರತ್ತೆ. ಇಂಥವೇ ಭ್ರಮೆಗಳ ಮಧ್ಯೆ ಸಿಲುಕಿದ ಹುಡುಗ ಒಂದು ದಿನ ಅವಳ ಎದುರು ನಿಂತು " ನಂಗೊತ್ತು. ನೀನು ನನ್ನ love ಮಾಡ್ತಾ ಇದೀಯ ಅಂತ i love you ಕಣೇ" ಅಂತಾನೆ. ಅವಳು "ಅಯ್ಯೋ! ಅಣ್ಣ ತಮ್ಮ ಇಲ್ಲದ ನಾನು ನಿನ್ನನ್ನೇ 'ಅಣ್ಣ' ಅಂದುಕೊಂದಿಡ್ನಲ್ಲೋ" ಅಂತಾಳೆ. ಕ್ಷಣದಿಂದ ಒಂದು ಸುಂದರ ಸ್ನೇಹ ಸತ್ತು ಕೊಳೆತು ನಾರಲು ಶುರುವಾಯಿತು ಅಂತಾನೆ ಅರ್ಥ.

ರವಿ ಬೆಳಗೆರೆ ಹೇಳಿದ ಮಾತು ನೆನಪಾಗತ್ತೆ..... ಒಂದು ಸಾರಿ i love you ಅಂದ ಮೇಲೆ, ಅದೆಷ್ಟೇ ಬಾರಿ ಮೊದಲಿನ ಥರಾನೆ friends ಆಗಿ ಇರೋಣ ಅಂದರೂ ಊಹೂಂ ಸಾಧ್ಯವಿಲ್ಲ. ಸ್ನೇಹ ಎಂಬ ಪುಟ್ಟ ಚಿಗುರಿಗೆ ದೊಡ್ಡ ಕೊಡಲಿ ಏಟು ಬಿದ್ದಿರುತ್ತೆ.ಆದರೆ
ಒಂದಂತೂ ನಿಜ
ನಾವು ಹುಡುಗರು ಎಂದೂ ಹೀಗೇ
ನೀವೇನಂತೀರಾ?