ನಿವೇದನೆ

ಭಾವನೆಗಳೂ ಎಂದಿಗೂ ಶಾಶ್ವತವಲ್ಲ....ಆದರೂ ಯಾವ ಭಾವಕ್ಕೆ ಸಾವಿಲ್ಲ ಅನ್ನಿಸಿತೋ ಅದನ್ನ ನಿಮ್ಮ ಮುಂದೆ ಇಟ್ಟಿದ್ದೇನೆ....ಈ ಭಾವಕ್ಕೆ ಜನಿಸಿದ ಕೂಸುಗಳೆಲ್ಲವೂ ಸುಂದರ, ಸಧೃಡ ಎನ್ನಲಾರೆ.... ಆದರೆ ಯಾವುದೂ ಸಮಯಕ್ಕೆ ಮೊದಲೆ ಹುಟ್ಟಿದ ಅಥವಾ ಸತ್ತು ಹುಟ್ಟಿದ ಕೂಸುಗಳಲ್ಲ....

Tuesday, May 26, 2009

ಸ್ವರ್ಗಾ ಮಗಾ ಸ್ವರ್ಗಾ, ಆದರೆ......

"ಆಹಾ, ಮನೆಯ ಮುಂದೆ ಹಸಿರು ಗುಡ್ಡ, ಹಿಂದೆ ಅಡಿಕೆ ತೋಟ, ಅಲ್ಲೇ ಹರಿಯೋ ಹೊಳೆ, ವರ್ಷದ ಆರು ತಿಂಗಳು ಜಿನುಗೋ ಮಳೆ, pure environment, hill station ಥರ ಇರೋ ಮನೆ, ಸುತ್ತಲೂ ವನರಾಜಿ.....ಹೆಬ್ಬಾರ ಸ್ವರ್ಗ ಕಣೋ ಸ್ವರ್ಗ....."

ನನ್ನ ಗೆಳೆಯರನ್ನ ಉತ್ತರ ಕನ್ನಡದ ಪ್ರಕೃತಿ ಸೌಂದರ್ಯವನ್ನ ಉಣಿಸಲು ಕಳೆದ ಮಳೆಗಾಲದಲ್ಲೇ ನಮ್ಮೂರಿಗೆ ಕರೆದುಕೊಂಡು ಹೋಗಿದ್ದಾಗ ಬಂದ ಮಾತುಗಳಿವು. ಆದರೆ ಇಷ್ಟೆಲ್ಲಾ ಹೇಳಿದ ಮೇಲೆ ಕೊನೆಯಲ್ಲಿ ಅವರ ಬಾಯಲ್ಲಿ ಬಂದಿದ್ದು 'ಆದರೆ.....' ಅನ್ನೋ ಪದ.

"
ಆದರೆ.....
ರಾತ್ರಿಯಲ್ಲೋ, ಮನೆಯಲ್ಲಿ ಯಾರೂ ಇರದಿರುವಾಗಲೋ ಏನಾದರೂ ಆದರೆ ಏನು ಮಾಡಬೇಕು? ಹತ್ತಿರದಲ್ಲಿ ಒಂದು ಆಸ್ಪತ್ರೆಯಿಲ್ಲ, ಸತ್ತೆ ಎಂದು ಕೂಗಿದರೆ ಕೇಳಿಸವಷ್ಟು ಹತ್ತಿರದಲ್ಲೂ ಮನೆಗಳಿಲ್ಲ; ಆಟೋ ಎಂದೋ ಕೂಗಿದ ಕೂಡಲೇ ಬರುವಂಥ ವಾಹನಗಳಿಲ್ಲ; ಬೇಸರ ಬಂದಾಗ ಸಿನೆಮಾ ನೋಡಬೇಕು ಅನ್ನಿಸಿದರೆ 30 ಕಿಲೋಮೀಟರ್ ದೂರಕ್ಕೆ ಹೋಗಬೇಕು....ಹ್ಯಾಗೋ ಬದ್ಕ್ತೀರ ಇಲ್ಲಿ? ಪಿಕ್ನಿಕ್ ಗೆ ಒಳ್ಳೆ place ಅಷ್ಟೇ, ಬದುಕೊದಕ್ಕಲ್ಲ ಕಣೋ....

ಅವರಿಗೆ ಇಂದು ನಾವು ಬದುಕುತ್ತ ಇರೋ ರೀತಿನೇ ವಿಚಿತ್ರ, ಭಯಂಕರ ಅನ್ನಿಸಿದರೆ ನಮ್ಮ ಹಿಂದಿನವರು ಇದ್ದರಲ್ಲ; ಎಲ್ಲಿಂದಲೋ ಬಂದು ಕಾಡಿನ ಮಧ್ಯೆ ಮನೆ ಮಾಡಿದರಲ್ಲ ಆಗಿನ ಸ್ಥಿತಿ ನೋಡಿದರೆ ಇನ್ನೇನೆನಿಸಬಹುದು? ಹೌದು, ಹವ್ಯಕರ ಮೂಲ ಉತ್ತರ ಭಾರತ ಅನ್ನೋ ಅಭಿಪ್ರಾಯ ತುಂಬಾ ಜನರಲ್ಲಿ ಇದೆ. ಬಹುಶಃ ಯಾವುದೋ ಮುಸ್ಲಿಂ ರಾಜನ ಆಳ್ವಿಕೆಯ ದಬ್ಬಾಳಿಕೆಯನ್ನ ತಡೆಯಲಾಗದೆ ಇಲ್ಲಿಗೆ ಓಡಿ ಬಂದು ಬದುಕು ಹೂಡಿರಬೇಕು; ಯಾಕೆಂದರೆ ರಾಜರುಗಳ ಅಭಿಪ್ರಾಯ ಜುಟ್ಟುದಾರರನ್ನ ಮತಾಂತರ ಮಾಡಿದರೆ ಇಡೀ ಹಿಂದೂ ಧರ್ಮವನ್ನೇ ಮತಾಂತರಿಸಬಹುದು ಎಂಬುದಾಗಿತ್ತು. ಆದರೆ ಹಾಗೆ ಓಡಿ ಬಂದವರು ನೆಲೆಸಿದ್ದದರೂ ಎಲ್ಲಿ? ರಾಜರಿರಲಿ ಸೂರ್ಯನ ಕಿರಣಗಳಿಗೆ ಪತ್ತೆ ಹಚ್ಚಲಾಗದಂಥ ಕಾಡುಗಳು....ಆಹಾ, ಮತ್ತಿಘಟ್ಟ, ಕಳಚೆ ಅಂಥ ಜಾಗೆಗಳನ್ನ ಇಂದು ನೋಡಿದರೆ ಏನು ಪ್ರಕೃತಿ ಸೌಂದರ್ಯವಪ್ಪಾ ಎಂದು ಹುಬ್ಬೇರಿಸಬಹುದಷ್ಟೇ. ಆದರೆ ಅಂದು ಅದು ಹೇಗೆ ಅಂಥ ಕಗ್ಗಾಡಿನಲ್ಲಿ ಬದುಕಿದರೋ! ರೋಗಗಳು ಬಂದಾಗ, ಗರ್ಭಿಣಿ-ಬಾಣಂತಿ-ಚಿಕ್ಕ ಚಿಕ್ಕ ಮಕ್ಕಳನ್ನ ಅದು ಹ್ಯಾಗೆ ನೋಡಿಕೊಂಡರೋ!! ಅಬ್ಬಾ, ಯೊಚಿಸಿದರೇ ಮೈ ಜುಮ್ಮೆನ್ನುತ್ತದೆ.

ಅಂದಿನ ಮಾತಿರಲಿ ಇಂದಿಗೂ ಜೋರು ಮಳೆ ಸುರಿದಾಗ ನಮ್ಮನೆಹತ್ತಿರದ ಹೊಳೆ ತುಂಬಿ ಹರಿಯುತ್ತದೆ....ಆಗ ನಮಗೆ ಯಾರ ಸಂಪರ್ಕವೂ ಸಾಧ್ಯವಿಲ್ಲ. phone ಸತ್ತು ಬಿದ್ದಿರತ್ತೆ. ನಾವು ಹೋಗಲು ಸಾಧ್ಯವಾಗುವುದು ನಮ್ಮ ಪಕ್ಕದಮನೆ ಹಬ್ಬಣಮನೆಗೆ ಮಾತ್ರ. ಪಕ್ಕದ ಮನೆ ಅಂದರೆ ಕೇವಲ ಮುಕ್ಕಾಲು ಕಿಲೋಮೀಟರ್ ದೂರ. ಅವರ ಮನೆಯದು ಇದೇ ಗತಿ...ನಮ್ಮೆರಡು ಮನೆಗಳದೇ ಒಂದು ಚಿಕ್ಕ ದ್ವೀಪ. ಹೀಗಿದೆ ಮತ್ತು ಹೀಗಿರಲೇಬೇಕು ಮಲೆನಾಡಿನ ಬದುಕು.....


ಸಾಧ್ಯವಾದರೆ ಜೋರು ಮಳೆಗಾಲದಲ್ಲಿ
ಒಮ್ಮೆ ಮಲೆನಾಡಿಗೆ ಬಂದು ನೋಡಿ....
ಹಲಸಿನ ಹಪ್ಪಳದೊಂದಿಂಗೆ ನಿಮ್ಮನ್ನ
ಬರಮಾದಿಕೊಳ್ಳುತ್ತೇವೆ...................


No comments:

Post a Comment